ಸಮಸ್ಯೆಗಳ ವಿರುದ್ದ ಸಮರಸಾರಿದ ಯುವ.... ರೇಟಿಂಗ್ : 4/5
Posted date: 29 Fri, Mar 2024 11:40:34 PM
ಚಿತ್ರ: ಯುವ
ನಿರ್ದೇಶನ: ಸಂತೋಷ್ ಆನಂದರಾಮ್
ನಿರ್ಮಾಣ: ಹೊಂಬಾಳೆ ಫಿಲಂಸ್, ವಿಜಯ್ ಕಿರಗಂದೂರು
ಸಂಗೀತ ಸಂಯೋಜನೆ; ಅಜನೀಶ್ ಲೋಕನಾಥ್
ಛಾಯಾಗ್ರಹಣ: ಶ್ರೀಶಾ ಕೂಡುವಳ್ಳಿ
ತಾರಾಗಣ: ಯುವ ರಾಜಕುಮಾರ್, ಸಪ್ತಮಿಗೌಡ, ಅಚ್ಯುತ್‌ಕುಮಾರ್, ಸುಧಾರಾಣಿ, ಕಿಶೋರ್, ಗೋಪಾಲಕೃಷ್ಣ ದೇಶಪಾಂಡೆ, ಹಿತಾ ಚಂದ್ರಶೇಖರ್ ಹಾಗೂ ಇತರರು,

ಹೊಂಬಾಳೆ ಫಿಲಂಸ್ ನಿರ್ಮಾಣದ ಯುವ ಸಾಕಷ್ಟು ನಿರೀಕ್ಷೆಗಳೊಂದಿಗೆ ಈವಾರ ತೆರೆಕಂಡಿದೆ. ಪುನೀತ್ ರಾಜ್ ಕುಮಾರ್ ಚಿತ್ರವೇ ಬಿಡುಗಡೆಯಾದಷ್ಟು ಸಡಗರ ಸಂಭ್ರಮದೊಂದಿಗೆ ಯುವ ಚಿತ್ರವನ್ನು ಅಭಿಮಾನಿಗಳು ಬರಮಾಡಿಕೊಂಡಿದ್ದರು. ಚಿತ್ರದಲ್ಲಿ ನಾಯಕ ಯುವ(ಯುವರಾಜ್‌ಕುಮಾರ)ನ ಹೋರಾಟದ ಬದುಕು, ಸಮಸ್ಯೆಯ ಜೀವನವನ್ನು ತೆರೆದಿರುವ ಪ್ರಯತ್ನವನ್ನು ನಿರ್ದೇಶಕ ಸಂತೋಷ್ ಆನಂದರಾಮ್ ಮಾಡಿದ್ದಾರೆ, ಯುವನಿಗೆ ವಿದ್ಯಾಭ್ಯಾಸದಲ್ಲಿ ಒಂದು ಸಮಸ್ಯೆಯಾದರೆ, ಕುಟುಂಬದಲ್ಲಿ ಇನ್ನೊಂದು ಸಮಸ್ಯೆ. ಕೆಲವು ಸಮಸ್ಯೆಗಳು ಆತನಿಗೆ ಗೊತ್ತಿಲ್ಲದಂತೆಯೇ ಎದುರಾದರೆ, ಇನ್ನೂ ಕೆಲವು ಸಮಸ್ಯೆಗಳು  ಆತನಿಂದಲೇ  ಉದ್ಭವಿಸಿರುತ್ತವೆ. ಇದೆಲ್ಲವುಗಳಿಂದ ಯುವ  ಹೇಗೆ  ಹೊರಬರುತ್ತಾನೆ ಎನ್ನುವುದೇ ಚಿತ್ರದ ಕಥೆ. ಒಬ್ಬ ಕಾಲೇಜ್ ಹುಡುಗನಾಗಿ, ಕುಸ್ತಿ ಪಟುವಾಗಿ ಹಾಗೂ ಡಿಲೆವರಿ ಬಾಯ್ ಆಗಿ ಮೂರು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲವೊಂದು ಸೀನ್‌ಗಳಲ್ಲಿ ಪುನೀತ್‌ರನ್ನು ನೆನಪಿಸುತ್ತಾರೆ.
 
`ಯುವ` ಯುವಕರನ್ನೇ ದೃಷ್ಟಿಯಲ್ಲಿಟ್ಟುಕೊಂಡು ಮಾಡಿದ ಪಕ್ಕಾ ಮಾಸ್, ಆಕ್ಷನ್ ಚಿತ್ರ, ಜೀವನದಲ್ಲಿ  ಎದುರಾಗುವ ಪ್ರೀತಿ, ಸೋಲು, ಹತಾಶೆ, ನೋವು ಎಲ್ಲವನ್ನೂ ಯುವ ಎದುರಿಸುತ್ತಾನೆ. ಸಾಮಾನ್ಯವಾಗಿ ಕಾಲೇಜ್ ಕಾನ್ಸೆಪ್ಟ್ ಇರೋ ಚಿತ್ರಗಳಲ್ಲಿ ಕಂಡುಬರುವ  ತರಲೆ, ತಮಾಷೆ, ತುಂಟಾಟ ಯಾವುದೂ ಇಲ್ಲಿಲ್ಲ.  ಸಮಾಜದಲ್ಲಿ ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ಮೌಲ್ಯಗಳು ಕುಸಿಯುತ್ತಿವೆ. ಆ ಹಿನ್ನಲೆಯಲ್ಲಿ ಅಪ್ಪ ಮಗನ ಬಾಂದವ್ಯ, ಗುರುಶಿಷ್ಯರ ಸಂಬಂಧವನ್ನೂ ಈ  ಚಿತ್ರದಲ್ಲಿ ಕಾಣಬಹುದಾಗಿದೆ. ಚಿತ್ರದ ಮೊದಲಾರ್ಧ  ಕಾಲೇಜು ಮತ್ತು ಹೊಡೆದಾಟದಲ್ಲೇ ಸಾಗಿದರೆ, ದ್ವಿತೀಯಾರ್ಧ ಜೀವನ ಮತ್ತು ಹೋರಾಟದ ಸುತ್ತ ನಡೆಯುತ್ತದೆ. ನಾಯಕ ತನ್ನ ಮನೆಗೆ ವಾಪಸಾದಾಗ ತಾನು ಇಷ್ಟುದಿನ ಎದುರಿಸಿದ್ದು ಸಮಸ್ಯೆಯೇ ಅಲ್ಲ, ಈಗ ಎದುರಿಸುತ್ತಿರುವುದೇ ನಿಜವಾದ ಸಮಸ್ಯೆ ಎಂಬ ಅರಿವಾಗುತ್ತದೆ. ಆ ಸಮಸ್ಯೆಗಳೇನು ಮತ್ತು ಅದೆಲ್ಲದರಿಂದ ಯುವ ಹೇಗೆ ಆಚೆ ಬರುತ್ತಾನೆ ಎಂಬುದನ್ನು  ಚಿತ್ರಮಂದಿರದಲ್ಲಿ ನೋಡಬೇಕು.
 
ಕಮರ್ಷಿಯಲ್ ಫಾರ್ಮುಲಾ ಬಿಟ್ಟು ನಿರ್ದೇಶಕರು ಬೇರೆಯದೇ ರೀತಿಯಲ್ಲಿ  ಚಿತ್ರವನ್ನು ತೆಗೆದುಕೊಂಡು ಹೋಗಿದ್ದಾರೆ, ಇಲ್ಲಿ  ನಾಯಕಿಯ ಪಾತ್ರವಿದ್ದರೂ, ಇಬ್ಬರೂ ಮರ ಸುತ್ತುವುದು, ಹಾಡುವುದು   ಯಾವುದೂ ಇಲ್ಲಿಲ್ಲ. ಹೀಗೆ ಸಿದ್ಧ ಸೂತ್ರಗಳನ್ನು ಬದಿಗೊತ್ತಿ ಕಥೆಗೆ ಏನು ಬೇಕೋ ಅದನ್ನು ಮಾತ್ರ  ಇಟ್ಟುಕೊಂಡು  ಚಿತ್ರ ಮಾಡಿದ್ದಾರೆ. 
 
ಶಿಕ್ಷಣ, ಜೀವನದ ಜೊತೆಗೆ ಕ್ರೀಡೆ ಈ ಮೂರೂ ವಿಷಯಗಳನ್ನಿಟ್ಟುಕೊಂಡು ಯುವನನ್ನು  ತೆರೆಮೇಲೆ ತಂದಿದ್ದಾರೆ ನಿರ್ದೇಶಕ ಸಂತೋಷ್ ಆನಂದರಾಮ್, ಹಾಗಾಗಿ, ಚಿತ್ರ ಬೆಂಗಳೂರು ಮತ್ತು ಮಂಗಳೂರು ಬಿಟ್ಟು  ಪಶ್ಚಿಮ ಬಂಗಾಳಕ್ಕೂ  ಹೋಗಿ ಬರುತ್ತದೆ. ಚಿತ್ರದಲ್ಲಿ  ತಂದೆ-ಮಗನ ಬಾಂಧವ್ಯದ ಕಥೆ, ಅಕ್ಕ-ತಮ್ಮನ ಸೆಂಟಿಮೆಂಟ್ , ಬದುಕಿನ ಹೋರಾಟದ ಕಥೆ ಇವೆಲ್ಲವನ್ನೂ ಸೇರಿಸಿ ಕ್ಲಾಸ್ ಅಂಡ್  ಮಾಸ್ ಎರಡೂ ವರ್ಗದ ಪ್ರೇಕ್ಷಕರನ್ನು  ಸೆಳೆಯಲು ಪ್ರಯತ್ನಿಸಲಾಗಿದೆ. ಯುವ ರಾಜಕುಮಾರ್ ಮಾಸ್ ಹೀರೋ ಆಗೇ ಮುಂದುವರಿಯುವ ಎಲ್ಲಾ ಲಕ್ಷಣಗಳು ಈ ಚಿತ್ರದ ಮೂಲಕ ಗೋಚರಿಸಿದೆ.
 
ನಾಯಕಿ  ಸಪ್ತಮಿಗೌಡ ಅವರ ಪಾತ್ರಕ್ಕೆ ಇಲ್ಲಿ ಹೆಚ್ಚು ಅವಕಾಶವಿಲ್ಲ,  ಉಳಿದಂತೆ ನಾಯಕನ ತಂದೆಯಾಗಿ  ಅಚ್ಯುತ್ ಕುಮಾರ್, ತಾಯಿಯಾಗಿ ಸುಧಾರಾಣಿ,  ಕೋಚ್  ಆಗಿ ಕಿಶೋರ್, ಗೋಪಾಲಕೃಷ್ಣ ದೇಶಪಾಂಡೆ ಎಲ್ಲರೂ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಅಕ್ಕನ  ಪಾತ್ರದಲ್ಲಿ  ಹಿತಾ ಚಂದ್ರಶೇಖರ್ ಇಷ್ಟವಾಗುತ್ತಾರೆ. ಚಿತ್ರದಲ್ಲಿ ಒಳ್ಳೆಯ ದೃಶ್ಯಗಳ ಜೊತೆಗೆ ಅತಿರೇಕದ ದೃಶ್ಯಗಳೂ ಇವೆ. ಪ್ರಿನ್ಸಿಪಾಲರು, ವಿದ್ಯಾರ್ಥಿ ಒಟ್ಟಿಗೆ ಕುಳಿತು ಕುಡಿಯುವ ದೃಶ್ಯ ಮುಜುಗರವೆನಿಸುತ್ತದೆ. ಶ್ರೀಷ ಕೂದುವಳ್ಳಿ ಅವರ ಕ್ಯಾಮೆರಾ ಕೈಚಳಕದಲ್ಲಿ ಚಿತ್ರ ಅದ್ದೂರಿಯಾಗಿ ಮೂಡಿಬಂದಿದೆ. ಅಜನೀಶ್ ಲೋಕನಾಥ್‌ರ ಸಂಗೀತದ ಎರಡು ಹಾಡುಗಳು ಇಷ್ಟವಾಗುತ್ತವೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed